ಭಂಗರ್ -
	 ಪ್ಲೀಸ್ಟೋ ಸೀನ್ ಯುಗ ಮತ್ತು ಅದರ ಅನಂತರ ಕಾಲದ ಮರಳು, ಜೇಡಿಮಣ್ಣು ಮತ್ತು ರಾಡಿಗಳಿಂದ ಕೂಡಿದ, ಉತ್ತರ ಭಾರತದ ಸಿಂಧೂ-ಗಂಗಾ ಬ್ರಹ್ಮಪುತ್ರಾ ನದಿಗಳ ವಿಸ್ತಾರ ಬಯಲಿನಲ್ಲಿ ಹಲವಾರು ಮೀಟರುಗಳ ಆಳದವರೆಗೆ ವ್ಯಾಪಿಸಿರುವ ಮೆಕ್ಕಲು ಮಣ್ಣಿನಿಂದ ಕೂಡಿದ ಪ್ರದೇಶ. ಈ ಬಯಲು ನೆಲದಲ್ಲಿ ಭೂವೈಜ್ಞಾನಿಕ ಕಾಲಮಾನದ ಬೇರೆ ಯಾವುದೇ ಶಿಲಾರಾಶಿಯೂ ಇಲ್ಲ. ಈ ತಗ್ಗು ಪ್ರದೇಶದ ರೂಪಣಿಗೂ ಹಿಮಾಲಯ ಪರ್ವತದ ಹುಟ್ಟು ಮತ್ತು ಏರಿಕೆಗೂ (ಅಪ್‍ಲಿಫ್ಟ್) ಸಂಬಂಧ ಉಂಟು. ಹಿಮಾಲಯದ ಏರಿಕೆಯಿಂದ ಹೊಸ ಹೊಸ ಶಿಲಾಭಾಗಗಳೂ ಶಿಥಿಲಗೊಂಡದ್ದರಿಂದಾಗಲಿ ನದಿಗಳ ಸಾಮಾನ್ಯ ಕಾರ್ಯಾಚರಣಿಯಿಂದಾಗಲಿ ಈ ತಗ್ಗುನೆಲ ಮೆಕ್ಕಲುಮಣ್ಣಿನಿಂದ ಆವೃತವಾಗುತ್ತ ಬಂದಿರಬೇಕು ಎಂಬುದು ಒಂದು ಅಭಿಪ್ರಾಯ. ಸಹಸ್ರಾರು ವರ್ಷಗಳ ಅವಧಿಯಲ್ಲಿ ನಡೆದ ಚಟುವಟಿಕೆಯಿಂದ ಈ ಬಯಲು ನಿರ್ಮಾಣಗೊಂಡು ಸಮುದ್ರದೆಡೆಗೆ ಸ್ವಲ್ಪ ಇಳಿಜಾರಾಗುತ್ತ ಬಂದು ಉತ್ತರ ರಾಜಸ್ತಾನದಿಂದ ಅಸ್ಸಾಮಿನ ಅರ್ಧಭಾಗ ವ್ಯಾಪಿಸಿಕೊಂಡಿದೆ. ಇಲ್ಲಿಯ ಮೆಕ್ಕಲುಮಣ್ಣು ದೆಹಲಿಯ ಸಮೀಪ ಅತ್ಯಂತ ದಪ್ಪವಾಗಿದೆ (4572 ಮೀ) ರಾಜಸ್ತಾನ ಮತ್ತು ರಾಜ ಮಹಲ್ ಅಸ್ಸಾಮ್‍ಗಳ ನಡುವೆ ಕಡಿಮೆ ಆಳದಲ್ಲಿದೆ.

ಮೆಕ್ಕಲುಮಣ್ಣಿನ ಈ ನಿಕ್ಷೇಪವನ್ನು ಹಳೆಯಬರಡು ಅಥವಾ ಬಂಗರ್ ಎಂದೂ ಹೊಸ ಬಂಡು ಅಥವಾ ಖದರ್ ಎಂದೂ ವಿಂಗಡಿಸಲಾಗಿದೆ. ಭಂಗರ್ ಎತ್ತರ ಪ್ರದೇಶದಲ್ಲಿ ಈಗ ನದಿಗಳು ಆಕ್ರಮಿಸಲಾದಂಥ ಸ್ಥಳಗಳಲ್ಲೂ, ಖದರ್ ಈಗ ನದಿಗಳು ಹರಿಯುವ ಸ್ಥಳಗಳ ಸಮೀಪದಲ್ಲೂ ಇವೆ. ನೆಲದ ಆಳಕ್ಕೆ ಹೋದಂತೆಲ್ಲ ಈ ನಿಕ್ಷೇಪಗಳು ಗಟ್ಟಿಯಾಗುತ್ತವೆ. ಮಾತ್ರವಲ್ಲದೆ ಜಲ್ಲಿ ಶಿಲೆಯಾಗೂ ರೂಪುಗೊಳ್ಳುತ್ತವೆ. ಇದರಲ್ಲಿ ಸುಣ್ಣ ಮಿಶ್ರಿತ ವಸ್ತುಗಳು ದುಂಡನೆಯ ಹರಳುಗಳ ಆಕಾರದಲ್ಲಿ ಇರುವುವು. ನೆಲದಡಿಯಲ್ಲಿ ಜರಗುವ ಜಲಕ್ರಿಯೆಯೂ ಈ ಆಕಾರಕ್ಕೆ ಕಾರಣವಿರಬಹುದು. ಈ ಸುಣ್ಣಮಿಶ್ರಿತ ಹರಳುಗಳಿಗೆ ಕಂಕರ್ ಎಂದು ಹೆಸರು. ಭಂಗರ್ ನಿಕ್ಷೇಪದಲ್ಲಿ ಇಂಥ ಹರಳುಗಳು ಅಧಿಕ ಪ್ರಮಾಣದಲ್ಲಿವೆ. ಭಂಗರ್ ಪ್ರದೇಶದಲ್ಲಿ ಆನೆ, ಈಕ್ವಸ್ ನೊಮಾಡಿಕಾಸ್, ಖಡ್ಗಮೃಗ, ನೀರಾನೆ ಮೊದಲಾದ ನಷ್ಟ ವಂಶಜಾತಿ ಪ್ರಾಣಿಗಳ ಜೇವ್ಯವಶೇಷಗಳಿವೆ. ಕಂಕರ್ ಸಿಮೆಂಟ್ ತಯಾರಿಕೆಗೆ ಉಪಯುಕ್ತ. ಭಂಗರ್ ಸುಭದ್ರ ಶಿಲೆಗಳಿಂದ ಕೂಡಿದೆಯಾಗಿ ಇದನ್ನು ದೊಡ್ಡ ಅಂತರ್ಜಲ ನಿಧಿ ಎಂದೇ ಹೇಳಬಹುದು. ಈ ಬಗೆಯ ಮೆಕ್ಕಲು ಮಣ್ಣು ಬಂಗಾಲ. ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಅಧಿಕ. ನದಿಯ ಪ್ರವಾಹದ ದಿಶೆ ಬದಲಾದಂತೆ ಈ ಪ್ರದೇಶ ಸವೆತಕ್ಕೀಡಾಗಿದೆ.	
(ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ